Tuesday, 30 August 2016

"ದಿ ಹಿಂದೂ " ಪತ್ರಿಕೆಯಲ್ಲಿ ಒಂದು ಕಾರ್ಟೂನು

ಹಲವಾರು ವರ್ಷಗಳ ಹಿಂದೆ "ದಿ ಹಿಂದೂ " ಪತ್ರಿಕೆಯಲ್ಲಿ ಒಂದು ಕಾರ್ಟೂನು ಪ್ರಕಟವಾಗಿತ್ತು. ಅದರಲ್ಲಿ ಮಧ್ಯವಯಸ್ಕನೊಬ್ಬ ಬೃಹದಾಕಾರದ ಮರವೊಂದರ ಮೇಲೆ ಹತ್ತಿ ಅದರ ಕೊಂಬೆಯೊಂದರ ಮೇಲೆ ಕಾಲನಿಟ್ಟು ಕೊಡಲಿಯಿಂದ ಅದನ್ನು ಕಡಿಯುತ್ತಿದ್ದ ! ಬಹುಷಃ ಇಂದಿನ ನಮ್ಮ ಪರಿಸ್ಥಿತಿಯೂ ಹಾಗೆಯೇ ಇದೆ ಅಥವಾ ಅದಕ್ಕಿಂತಾ ಬಿಗಡಾಯಿಸಿದೆ ! ಈ ಭೂಮಂಡಲವು ಅಸ್ಥಿತ್ವಕ್ಕೆ ಬಂದ ಕೋಟ್ಯಾನುಕೋಟಿ ವರ್ಷಗಳಿಂದ ಭೂಮಿಯ ಸರಾಸರಿ ತಾಪಮಾನ ಒಂದು ಸಮತೋಲನವನ್ನು ತಂತಾನೇ ಕಾಪಾಡಿಕೊಂಡು ಬಂದಿದ್ದು ಇತ್ತೀಚೆಗಿನ ನೂರು ವರ್ಷಗಳಲ್ಲಿ ಅದು ಎರಡು ಡಿಗ್ರೀ ಸೆಲ್ಸಿಎಸ್ ನಷ್ಟು ಹೆಚ್ಚಾಗಿದೆ ! ಇನ್ನು ಸಮುದ್ರದಮೇಲೆ ಹೆಪ್ಪುಗಟ್ಟಿರುವ ಮಂಜುಗಡ್ಡೆಯ ಪರ್ವತಗಳು ಕರಗಲು ಇರುವುದು ಎರಡು ಡಿಗ್ರೀ ಸೆಲ್ಸಿಎಸ್ ನಷ್ಟು ಗಡುವು ಅಷ್ಟೇ !

ಮೊನ್ನೆ ಮೊನ್ನೆಯಷ್ಟೇ ಚೀನಾ ಬಿಡುಗಡೆಗೊಳಿಸಿದ ವರದಿಗಳ ಪ್ರಕಾರ "ಬಿಜಿಂಗ್" ನಗರ  ೧೯೨೦ ರಿಂದ ಈಚೆಗೆ ಹಲವು ಅಡಿಗಳಷ್ಟು ಕುಸಿದಿದೆಯಂತೆ ! ಅಂದರೆ ಅಷ್ಟೇ ಅಡಿಗಳಷ್ಟು ಸಾಗರದ ನೀರು ಮೇಲೆ ಬಂದಿರಬೇಕಲ್ಲವೇ ? ವಿಶ್ವದ ಅತೀ ಹೆಚ್ಚು ಜನಸಂಖ್ಯೆಯುಳ್ಳ  ದೇಶಗಳಾದ ಅಮೇರಿಕಾ , ಚೀನಾ , ಭಾರತದಂತಾ ರಾಷ್ಟ್ರಗಳ ವಾಟರ್ ಸೈಕಲ್ ನಲ್ಲಿ ಭಾರಿ ವ್ಯತ್ಯಯ ಕಂಡು ಬರುತ್ತಿದೆ ಮತ್ತು ಇದನ್ನು ಸ್ಯಾಟೆಲೈಟ್ ಇಮೇಜಿಂಗ್ನ ಸಹಾಯದಿಂದ ನಾವು ಯಾವಾಗಲೋ ಪತ್ತೆ ಹಚ್ಚಿದ್ದೇವೆ !

ಮಳೆ ನೀರು ಭೂಮಿಯೊಳಗೆ ಇಂಗುವುದು ಒಂದು ಪಾಲಾದರೆ ಭೂಮಿಯಿಂದ ನಾವು ಎಳೆದುಕೊಳ್ಳುವ ಪಾಲು ಹತ್ತರಷ್ಟು!
ಪ್ರಪಂಚ ನಗರ ಕೇಂದ್ರಿತವಾಗುತ್ತಿರುವುದರಿಂದ ಭೂಮಿಯೊಳಗಿನ ಅಂತರ್ಜಲದ ಕೋವೆಗಳು ಸಣ್ಣ ಸಣ್ಣ ಜಲಾಶಯಗಳು ಅತೀ ವೇಗವಾಗಿ ಬರಿದಾಗುತ್ತಿವೆ. ವಿಶ್ವದ ಹತ್ತು ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ ಹಲವು  ನಗರಗಳು ಇದ್ದು ಈ ವಿಷಯ ಈ ಬಾರಿಯ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಚರ್ಚೆಯ ವಿಷಯವೂ ಆಗಿದೆ !
ಕಾಡುಗಳು ಎಂದಿನಂತೆ ಈ ವರ್ಷವೂ ಎಲ್ಲ ದೇಶಗಳಲ್ಲಿ ಕಡಿಮೆಯಾಗುತ್ತಿದ್ದು ಅದರ ಪುನರುಜ್ಜೇವನ ಕಾರ್ಯ ಸರಿಯಾಗಿ ನೆಡೆಯುತ್ತಿಲ್ಲ. ಎಬೋಲಾ ದಂತಹಾ ಮಾರಣಾಂತಿಕ ವೈರಸ್ ಮನುಷ್ಯನ ಸಹವಾಸಕ್ಕೆ ಬಂದಿರುವುದೂ ಇದೇ  ಕಾರಣಕ್ಕೆ  !

ಬೀಜಿಂಗ್ ನಗರದಲ್ಲಿ ವಾಹನ ಸಂದಣೆ ಹೆಚ್ಚಿರುವ ಹೊತ್ತಿನಲ್ಲಿ ಯಾರೂ ಫೇಸ್ ಮಾಸ್ಕ್ ಇಲ್ಲದೆ  ಹೊರಗಡೆ ಬೀದಿಗಳಲ್ಲಿ ಓಡಾಡುವಂತಿಲ್ಲ ಎಂದು ಅಲ್ಲಿನ ಸರ್ಕಾರವೇ ಹುಕುಂ ಹೊರಡಿಸಿದೆ ! ನಮ್ಮದೇ ನವದೆಹಲಿಯಲ್ಲಿ ಮುಂಜಾವಿನ ಸ್ಮಾಗ್ ( ಸ್ಮೋಕ್ + ಫಾಗ್ ) ನಿಂದಾಗಿ ಉಸಿರಾಟದ ತೊಂದರೆಗಳು ಹೇರಳವಾಗಿ ವರದಿಯಾಗುತ್ತಿವೆ ! ಇಲ್ಲಿಯವರೆವಿಗೂ ವಾಟರ್ ಪ್ಯೂರಿಫೈಯೆರ್ ಮತ್ತು AC ಗಳನ್ನ ಹಾಕಿಸಿಕೊಳ್ಳುತ್ತಿದ್ದ ನಾವುಗಳು ಈಗ ಏರ್ ಪ್ಯೂರಿಫೈಯೆರ್ ಗಳ ಮೊರೆಹೋಗಿದ್ದೇವೆ !
ಕಳೆದ ವರ್ಷವಷ್ಟೇ ಈ ಯಂತ್ರ ಗಳು amazon ಮತ್ತು flipkart ಮುಂತಾದ e -commerce platform ಗಳಿಂದ ಬಿಸಿ ಕೇಕಿನ ತರಹ ಬಿಕರಿಯಾಗಿವೆ !

ಅಣುಬಾಂಬಿನ ಅಟ್ಟಹಾಸಕ್ಕೆ ನಲುಗಿದ್ದ ಹಿರೋಷಿಮಾ -ನಾಗಾಸಾಕಿಯ "ಜಪಾನ್" ದೇಶ ಫುಕುಶಿಮಾ ಅಣುಸ್ಥಾವರದಿಂದ ಸೋರಿಕೆಯಾದ radioactive material ನಿಂದಾಗಬಹುದಾದ ಆನಾಹುತಗಳನ್ನು ಮನಗಂಡು ಅಣುಸ್ಥಾವರಗಳ ಮುಂದುವರಿಕೆಯ ಬಗೆಗೆ ಗಂಭೀರ ಚಿಂತನೆ ನೆಡೆಸಿದೆ ! ೨೦೫೦ ಕ್ಕೆ ಮುಗಿದೇಹೋಯಿತು ಎನ್ನುತ್ತಿದ್ದ ತೈಲ ಬೇರೆಬೇರೆ ರೀತಿಯಲ್ಲಿ ಸಿಗತೊಡಗಿದೆ. ಅಮೇರಿಕಾ ದೇಶ ಕೊಲ್ಲಿ ರಾಷ್ಟ್ರಗಳಿಂದ ಅಹಮದು ಮಾಡಿಕೊಳ್ಳುತ್ತಿದ್ದ ತೈಲದ ಪ್ರಮಾಣ ಕಳೆದ ಆರೆಂಟು ವರ್ಷಗಳಲ್ಲಿ ೩೦ ಪ್ರತಿಶತ ಕಡಿಮೆಯಾಗಿದೆ ಮತ್ತು ಈ ಕೊರತೆಯನ್ನು ಅಮೆರಿಕಾದ ಹಿತ್ತಲ ತೈಲ shale oil ಮತ್ತು shale gas ನೀಗಿಸುತ್ತಿದೆ ! ಕೆನಡಾದ ಸಾಗರದಾಳದಲ್ಲಿ ಮತ್ತಷ್ಟು ತೈಲಪತ್ತೆಯಾಗಿದೆ, ಬ್ರೆಜಿಲ್ಬನ ಸಾಗರದಲ್ಲಿ ಮರಳಿನ ಜೊತೆಗೆ ತೈಲ ಬೆರೆತಿದೆ ! ಅಮೇರಿಕಾ ಕಲ್ಲಿದ್ದಲ ಗಣಿಗಳನ್ನು ಮುಚ್ಚುತಾ ಬಂದರೆ ಭಾರತ , ಚೀನಾ , ಕೆನಡಾ ಮತ್ತು ಆಸ್ಟ್ರೇಲಿಯಾದಂತಹಾ ರಾಷ್ಟ್ರಗಳು ಕಲ್ಲಿದ್ದಲಿನ ಗಣಿಗಾರಿಕೆ ಯನ್ನು ಹೆಚ್ಚಿಸಿವೆ ! ಇದರಿಂದ fossil fuel ನ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗುತ್ತಾ ಹೋಗಿ ಇತರೆ ನಿರುಪದ್ರವಿ ಶಕ್ತಿಗಳಾದ ಗಾಳಿ ಮತ್ತು ಜಲ ವಿದ್ಯುತ್ , ಸೌರ ಶಕ್ತಿಯ ಮೇಲಿನ ನಮ್ಮ ಗಮನ ಮಾಸುತ್ತಿದೆ !

ಎಲ್ಲೆಡೆ ಮಣ್ಣು ತನ್ನ ಪಲವತ್ತತೆಯನ್ನು ಕಳೆದುಕೊಂಡು ಇನ್ನಷ್ಟು ಮತ್ತಷ್ಟು ರಸಗೊಬ್ಬರ ಮತ್ತು ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳನ್ನು  ಆಗ್ರಹಿಸುತ್ತಿದೆ ! ಭಾರತದಂತಹಾ ಸಮಶೀತೋಷ್ಣ ದೇಶದಲ್ಲಿ ಬೇಸಿಗೆಯಲ್ಲಿ ಅತೀವೃಷ್ಟಿಯಾದರೆ ಮಳೆಗಾಲದಲ್ಲಿ ಬಿಸಿಲು ಝಳಪಿಸುತ್ತಿದೆ ! ಮಳೆ ,ಚಳಿ ಮತ್ತು ಬೇಸಿಗೆಯ ಬಂದಿರುವಿಕೆಯಲ್ಲಿ ಭಾರಿ ವ್ಯತ್ಯಯ ಕಾಣುತ್ತಿದೆ. ಇವೆಲ್ಲವೂ ಭಾರಿ ಪ್ರಮಾಣದ ಧಾರಣಾ ಶಕ್ತಿಯಿರುವ ಭೂಮಿಗೆ ಸುಲಭದ ಮಾತಲ್ಲದಿದ್ದರೂ ನಮ್ಮ ಇನ್ನೂರು ಮುನ್ನೂರು ವರ್ಷಗಳ ಅದರಲ್ಲೂ ಕೈಗಾರಿಕಾ ಕ್ರಾಂತಿಯಿಂದ  (industrial revolution) ಈಚೆಗಿನ ಮನುಕುಲದ  ವ್ಯವಹಾರಗಳು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ !

ಹಸಿ ತರಕಾರಿಗಳಲ್ಲಿ ಕೀಟನಾಶಕಗಳಿದ್ದರೆ packed ಫುಡ್ ನಲ್ಲಿ ರಾಸಾಯನಿಕ preservatives ಇರುತ್ತದೆ ! ಅಂತರ್ಜಲಕ್ಕೆ ಮಳೆನೀರಿಗಿಂತ  ಪರಿಷ್ಕರಿಸದೇ ಬಿಟ್ಟ ಕಲುಷಿತ ನೀರೇ ಸೇರಿಕೊಳ್ಳುತ್ತಿದೆ !  ಬೆಂಗಳೂರಿನಂತಹ ನಗರಗಳ ಅದರಲ್ಲೂ ನೀರಿಗಾಗಿ ಅಂತರ್ಜಲವನ್ನೇ ಅವಲಂಭಿಸಿರುವ ಪ್ರದೇಶಗಳಲ್ಲಿ ಜನರಿಗೆ ಅಲರ್ಜಿ,ಮೂಗು ಸೋರಿಕೆ, ಕಣ್ಣಿನ ತೊಂದರೆ ಯಂತಹಾ ಖಾಯಿಲೆಗಳು  ಸಾಮಾನ್ಯವಾಗಿಬಿಟ್ಟಿವೆ ಮತ್ತು ಇದನ್ನು ಅಲ್ಲಿನ ಸುತ್ತಮುತ್ತಲಿನ ಆಸ್ಪತ್ರೆಗಳು ದೃಢಪಡಿಸಿವೆ !

ಇನ್ನು ವರ್ತೂರು ಕೆರೆಯ ಹಾರುವ ನೊರೆ, ಆನೇಕಲ್ಲಿನ ಬೋರಿನಲ್ಲಿ ಬರುವ ಕೆಂಪನೆಯ ನೀರು, ಚಂದಾಪುರದ ಹೊಲಗಳಲ್ಲಿ ಅಲ್ಲಲಿ ಹತ್ತುವ ಬೆಂಕಿ (ಇದು ಅಂತರ್ಜಲದ  ಕಲುಷಿತ ನೀರಿನಿಂದ ಹೊರಬರುವ methane gas  ಬಿಸಿಲಿನ ತಾಪಕ್ಕೆ ಹೊತ್ತಿಕೊಳ್ಳುವ ಪರಿ ),ಬೆಳ್ಳಂದೂರು ಕೆರೆಯಲ್ಲಿ ಸತ್ತ ಪಕ್ಷಿ-ಮೀನುಗಳು, ನಮ್ಮ ಕಸವಿಲೇವಾರಿಯ ನಿಷ್ಕ್ರಿಯತೆಯನ್ನು ನಮ್ಮ  ಮೀಡಿಯಾಗಳಲ್ಲದೆ washington post , newyork times ಗಳೂ ಕೊಂಡಾಡಿವೆ !

ನಾವು ಅವಿವೇಕಿಗಳಂತೆ ಚಿನ್ನದ ಮೊಟ್ಟೆಇಡುವ ಪ್ರಕೃತಿಯ ಗರ್ಭವನ್ನು ಅತಿಯಾಸೆಯಿಂದ ಕೊಯ್ಯುತ್ತಿದ್ದೇವೆ ! ದುಂಬಿ ಹೋಗುವವರೆಗೂ ಕಾಯದೆ ಅದನ್ನು ಸಾಯಿಸಿ ಜೇನುತುಪ್ಪವ ಕೀಳುತ್ತಿದ್ದೇವೆ ! ಪ್ರಕೃತಿಯು ಲಕ್ಷಕೋಟಿವರ್ಷಗಳಿಂದ ಕಾಪಾಡಿಕೊಂಡು ಬಂದ ಸಮತೋಲನವನ್ನು (ecological balance ) ಆಗಲೇ ಅದೂ ಬರೀ ಇನ್ನೂರು ಮುನ್ನೂರು ವರ್ಷಗಳಲ್ಲೇ ಮುರಿದಿದ್ದೇವೆ ! ನೀರನ್ನು ಬಾಟಲಿಯಿಂದ ಕುಡಿದು , ಗಾಳಿಯನ್ನು ಯಂತ್ರದಿಂದಪಡೆದು , ತರಕಾರಿಗಳನ್ನು ರಾಸಾಯನಿಕಗಳಿಂದ ತೊಳೆದು ಕೃತಾರ್ಥರಾಗುತ್ತಿದ್ದೇವೆ !