Sunday, 16 October 2016

ಇದು ಬರಿ ಮರವಲ್ಲೋ ಅಣ್ಣಾ ದೇವರ ಕೃಪೆ ಕಾಣೋ !!!

( ಎಡದಿಂದ ಬಲಕ್ಕೆ : ಮೊದಲನೆಯವರು_ದರ್ಶನ್ , ಮೂರನೆಯವರು_ಟಾಮ್ ಗೂಗನ್ ಹ್ಯಾಮ್ )

ಇತ್ತೀಚೆಗೊಂದು ಅಂಕಣ ಓದಿದೆ ಮರಗಳ ಬಗ್ಗೆ , ಅದರ ವಿಶೇಷವೆಂದರೆ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ತಲಾವಾರು ಮರಗಳೆಷ್ಟಿವೆ ಎಂಬುದರ ಬಗ್ಗೆ ಮಾಹಿತಿಯಿತ್ತು . ಕೆನಡಾದಲ್ಲಿ ವ್ಯಕ್ತಿಯೊಬ್ಬನಿಗೆ ೮೦೦೦ ಮರಗಳಿದ್ದರೆ ಅಮೇರಿಕಾದಲ್ಲಿ ಅದು ೪೦೦ ರಕ್ಕೆ ಕುಸಿದಿದೆ , ಹಾಗೆಯೇ ಚೀನಾದಲ್ಲಿ ೧೨೦ ಇದ್ದರೆ ಭಾರತದಲ್ಲಿ ಕೇವಲ ೨೮ !

ಅಮೆಜಾನ್ ಕಾಡುಗಳನ್ನು ಬಿಟ್ಟರೆ ವಿಶ್ವದಲ್ಲೇ ಅತ್ಯಂತ ಜೀವವೈವಿಧ್ಯವಿರುವ ಕಾಡುಗಳು ಭಾರತದಲ್ಲಿವೆ ಅದರಲ್ಲೂ ನಮ್ಮ ಪಶ್ಚಿಮಘಟ್ಟದ ಕಾಡುಗಳು ಈ ವಿಷಯದಲ್ಲಿ ಮುಂದಿವೆ. ಆದರೆ ಜಗತ್ತಿನ ಎಲ್ಲ ಭಾಗಗಳಲ್ಲಿ  ದಿನವೊಂದಕ್ಕೆ ಸಾವಿರ ಸಾವಿರ ಹೆಕ್ಟೇರುಗಳಷ್ಟು ಕಾಡುಗಳು ನಾಶವಾಗುತ್ತಿವೆ ! 

ತೇಜಸ್ವಿಯವರು ಅಮೆಜಾನ್ ಕಾಡುಗಳ ಬಗ್ಗೆ ಬರೆದಿರುವ ಪ್ರಬಂಧದಲ್ಲಿ  ಹೀಗಿದೆ " ಒಂದುವೇಳೆ ಅಮೆಜಾನ್ ಕಾಡುಗಳ ವೈಮಾನಿಕ ಸಮೀಕ್ಷೆ ನಡೆಸಿದರೆ ನೂರಾರು ಬುಲ್ಡೋಸೆರ್ ಗಳು ಏಕಕಾಲಕ್ಕೆ ದಟ್ಟಾರಣ್ಯ ವನ್ನು ನೆಲಕ್ಕೆ ಉರುಳಿಸುತ್ತಿರುವುದು ಕಾಣಸಿಗುತ್ತದೆ " ಎಂಬುದು. ಹಾಗೆಯೇ ಪಶ್ಚಿಮ ಘಟ್ಟಗಳ ಬಗೆಗಿನ "ಮೇದರಹಟ್ಟಿಯ ಅವಸಾನ" ದಲ್ಲಿಯೂ ಕಾಡಿನ , ಮರಗಳ ಮತ್ತು ಮನುಷ್ಯ ಸಂಭಂದಗಳ ಬಗ್ಗೆ ಆತೀ ಸೂಕ್ಷ್ಮ ಗ್ರಾಹಿಯಾಗಿ ಬರೆದಿದ್ದಾರೆ ! ಕಾರಣ ಸರಳ ಮರವಿದ್ದರೆ ಮನುಷ್ಯ , ಹಕ್ಕಿ, ಪಕ್ಷಿ , ಪ್ರಾಣಿ ಸಂಕುಲ , ಸರೀಸೃಪ ಇಲ್ಲದಿದ್ದರೆ ವೈಪರೀತ್ಯ  ಮತ್ತು ವಿಕೋಪ !

ಇನ್ನು ಬೆಂಗಳೂರಿನ ವಿಚಾರಕ್ಕೆ ಬಂದರೆ ದಶಕಗಳ ಹಿಂದೆ ಒಬ್ಬ ವ್ಯಕ್ತಿಗೆ    ಮರಗಳಿದ್ದುದು  ಈಗ ವ್ಯತಿರಿಕ್ತ ವಾಗಿ ಐದು ಮನುಷ್ಯರಿಗೆ ಒಂದು ಮರವಿದೆಯಂತೆ  ! ಅಂದರೆ ಕೆಲವೇ ದಶಕಗಳಲ್ಲಿ ಮರಗಳಸಂಖ್ಯೆ ಹತ್ತರಷ್ಟು ಕಡಿಮೆಯಾಗಿರುವುದು. ಇದು ಅಭಿವೃದ್ಧಿಯ, ಅಪಾಯದ ಮುನ್ಸೂಚನೆಯ, ಅತಿಯಾಸೆಯ ಹೆಸರಿನಲ್ಲಿ ಆಗಿರುವಂಥಹುದು. 
ಕೆಲವೊಮ್ಮೆ ಒಂದುಕಡೆ ಮರಕಡೆದು ಅದಕ್ಕಿಂತಾ ಹೆಚ್ಚು ಸಸಿಗಳನ್ನು ಬೇರೊಂದು ಕಡೆ ನೆಡುತ್ತೇವೆಂದು ಹೇಳಿ ಕೈತೊಳೆದು ಕೊಳ್ಳುವ ಕೆಟ್ಟ ಮತ್ತು ಅವೈಜ್ಞಾನಿಕ ಮಾದರಿಯನ್ನು ನಾವು ಅನುಸರಿಸಿದ್ದೇವೆ ! ಸಸಿಗಳ್ಳನ್ನು ನೆಟ್ಟರೆ ಮುಗಿಯಿತು ಅದಕ್ಕೆ ಒಂದುದಿನವೂ ನೀರು ಹಾಕದವರು "ನೆಟ್ಟ ದೊಡ್ಡಸ್ತಿಕೆ " ತೋರಿಸಿಕೊಂಡು " This tree is planted by so and so " ಎಂದು ಬರೆಸಿಕೊಂಡು ಖುಷಿಪಡುತ್ತೇವೆ !

ಹೀಗಿರುವಾಗ ಒಂದು ಸಂಗತಿ ನೆನಪಿಗೆ ಬರುತ್ತಿದೆ. 

ಬಹುಷಃ ಐದಾರು ವರ್ಷಗಳ ಹಿಂದಿನ ಮಾತು, ಪಶ್ಚಿಮ ಘಟ್ಟದಲ್ಲಿ ಶ್ರೀಗಂಧದ ಮರಗಳ್ಳರನ್ನು ಪೊಲೀಸರು ರಾತ್ರೋ ರಾತ್ರಿ ಗುಂಡಿಕ್ಕಿ ಕೊಂದರು. ನಾವು ಮರುದಿನ ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾಗ 'ಧಡಾರೆಂದು' ಬಾಗಿಲನ್ನು ದೂಡಿಕೊಂಡು ಬಂದ    ' ಟಾಮ್ ಗೂಗನ್ ಹ್ಯಾಮ್ ' ಏರಿದ ಧ್ವನಿಯಲ್ಲಿ " your country is great " ಎಂದರು ! ಅವರ ಕೈಲಿ ಅಂದಿನ " ಟೈಮ್ಸ್ ಆ ಇಂಡಿಯಾ " ಪತ್ರಿಕೆಯಿತ್ತು ಮತ್ತು ಅವರು ಅದರಲ್ಲಿ ಪ್ರಕಟವಾದ " ಶ್ರೀಗಂಧದ ಮರಗಳ್ಳರನ್ನು  ಗುಂಡಿಕ್ಕೆ ಕೊಂದ  ಪೊಲೀಸರು" ಎಂಬ ಅಂಕಣ ವನ್ನು ಓದಿದ್ದರು ! 
' ಟಾಮ್ ' ನಮ್ಮ ಕಂಪನಿಯ ಅತ್ಯಂತ ಹಿರಿಯ ವಿಜ್ಞಾನಿಗಳಲೊಬ್ಬರು. ರಸಾಯನಶಾಸ್ತ್ರ ದಲ್ಲಿ ಡಾಕ್ಟ್ರೇಟ್ ಪದವಿ ಪಡೆದು ೬೦ ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿ ಹಲವಾರು ಪ್ರತಿಷ್ಠಿತ ಜರ್ನಲ್ ಗಳ್ಳಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಪ್ರಕಟಿಸಿ ಇತ್ತೀಚೆಗೆ nitration ನ ಬಗೆಗೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿರುವವರು ! ಎಲ್ಲದಕ್ಕಿಂತಾ ಮುಖ್ಯವಾಗಿ ಅವರು ಅಮೆರಿಕಾದ  ' ಮೌಂಟ್ ವರ್ನನ್ ' ನಲ್ಲಿ ದಶಕಗಳ ಹಿಂದೆ ಹೆಕ್ಟೇರುಗಳಷ್ಟು ಜಮೀನು ಖರೀದಿಸಿ ಸಸಿಗಳನ್ನು ನೆಟ್ಟದ್ದರಿಂದ ಈಗ ಅದು ೫೦೦೦ ಮರಗಳ ಕಾಡು ! ಅವರಲ್ಲಿ ನರ್ಸರಿ ನಡೆಸುತ್ತಾರೆ, ಅಲ್ಲಿಗೆ ಬರುವವರಲ್ಲಿ ಮರಗಳ ಬಗ್ಗೆ , ತಳಿಗಳ ಬಗ್ಗೆ , ಕಾಡಿನ ಅವಶ್ಯಕತೆಯ ಬಗ್ಗೆ ಮನದಟ್ಟು ಮಾಡಿಕೊಟ್ಟು ಸಸಿಯನ್ನೂ ಕೊಡುತ್ತಾರೆ  ! 
ಅಷ್ಟೇ ಅಲ್ಲದೆ ಅಮೆರಿಕಾದ ತಮ್ಮ ಗೆಳೆಯರೊಡಗೂಡಿ " Tree Army " ಸ್ಥಾಪಿಸಿ ಅವೈಜ್ಞಾನಿಕ, ಅಪ್ರಸ್ತುತ ಮರ ಕಡಿಯುವಿಕೆ ಕಂಡುಬಂದಲ್ಲಿ ಅಂತಹ ಸ್ಥಳಕ್ಕೆ ಧಾವಿಸಿ ಅದನ್ನು ವಿರೋಧಿಸುತ್ತಾರೆ !

( ಭಾರತದಿಂದ ಕೆಲಸದಮೇಲೆ ಹೋಗುವ ನನ್ನ ಸಹೋದ್ಯೋಗಿಗಳೆಲ್ಲರೂ ಅವರ ಕಾಡನ್ನು ನೋಡಿ ಅಚ್ಚರಿಪಟ್ಟಿದ್ದಾರೆ ! ನನಗೆ ಇನ್ನೂ ಆ ಭಾಗ್ಯ ಸಿಗದಿದ್ದರಿಂದ ಕೆಲವೊಮ್ಮೆ ಹೊಟ್ಟೆ ಕಿಚ್ಚಾಗುತ್ತದೆ ! )

ಅಂತಹವರಿಗೆ ಶ್ರೀಗಂಧದ ಮರದ ಕೇಸು ಅತ್ಯಂತ ಖುಷಿ ಪಡಿಸಿದಂತೆ ಕಂಡಿತು ! ಮರಕಡಿ(ಕದಿ)ಯುವವರನ್ನು ಗುಂಡಿಕ್ಕಿ ಕೊಲ್ಲುವ ನಿಮ್ಮ ದೇಶದ " ಕಾನೂನು ಮತ್ತು ಸುವ್ಯವಸ್ಥೆ " ಉತ್ಕೃಷ್ಟವಾದುದು ಎಂದರು ! ಅಷ್ಟಕ್ಕೇ ಸುಮ್ಮನಿದ್ದರೋ ?  ಇಲ್ಲ ! ಆ ಅಂಕಣವನ್ನು ಸ್ಕ್ಯಾನ್ ಮಾಡಿ ತಮ್ಮ "Tree Army " ಗೆ ಮೇಲ್ ಮಾಡಿದರು ! ಕೆಲವು ಗಂಟೆಗಳ್ಳಲ್ಲಿ ಅವರ ಮೇಲ್ ಬಾಕ್ಸ್ ತುಂಬಿತ್ತು ಮತ್ತು ಅಮೆರಿಕಾದ ಅವರ ಮಿತ್ರರು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು ! ನಾವೆಲ್ಲಾ ಈ ವಿಷಯಕ್ಕೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಅವಕ್ಕಾಗಿದ್ದರೂ ' ಹುಸಿ ಗರ್ವ ' ಪ್ರದರ್ಶಿಸುತ್ತಿದ್ದೆವು !

ಅದೇ 'ಟಾಮ್ ' ಅವರನ್ನು ಕಳೆದ ಎರಡು ವರ್ಷಗಳ ಹಿಂದೆ ಭೇಟಿ ಮಾಡಿದಾಗ ( ಬೆಂಗಳೂರಿನಲ್ಲೇ !) ಕೃಷ್ಣಗಿರಿ -ಧರ್ಮಪುರಿ ಕಾಡಿನಲ್ಲಿ ಕೆಂಪು ಚಂದನ ( Red sandal ) ವನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಪೋಲೀಸರ ಕೈಗೆ ಸಿಕ್ಕು ಬಲಿಯಾದ ಎಂಟು ಜನರಬಗ್ಗೆ ಹೇಳಿದೆ, ಅವರ ಆನಂದಕ್ಕೆ ಪಾರವೇ ಇರಲಿಲ್ಲ ! ಆ ಅಂಕಣದ ಲಿಂಕನ್ನು ಪಡೆದು ಅದನ್ನೂ ಅವರ ಸ್ನೇಹಿತರೊಂದಿಗೆ ಹಂಚಿಕೊಂಡರು. 

ಸಾಧಾರಣವಾಗಿ ವಿದೇಶದಿಂದ ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬರುವವರು ಮೈಸೂರು ಅರಮನೆ ಇತ್ಯಾದಿ ನೋಡಲು ಬಯಸಿದರೆ ' ಟಾಮ್ ' ಬಂದಾಗಲೆಲ್ಲಾ ಜಲಪಾತ , ನದಿ , ಹೊಳೆದಂಡೆ ಮತ್ತು ಕಾಡುಗಳನ್ನು ನೋಡಲು ಬಯಸುತ್ತಾರೆ. ಕಳೆದ ಬಾರಿ ಬಂದಾಗಲೂ ಅದೇ ಆದ್ದು.  " ನಿಮ್ಮ ಕಾಡುಗಳನ್ನು ನಾನು ನೋಡಿಲ್ಲ ಹೋಗಿ ಬರೋಣವೇ ?" ಅಂದರು. 
ನಾನು " ಎರಡು ದಿನಗಳಾದರೂ ಬೇಕು " ಎಂದೆ ! ಅವರಿಗೆ ಅಷ್ಟು ಸಮಯ ಇರದಿದ್ದುದರ ಕಾರಣ " ಒಂದು ದಿನದಮಟ್ಟಿಗೆ ಹತ್ತಿರದಲ್ಲಿ ಯಾವುದಾದರೂ ಕುರುಚಲು ಕಾಡಿಲ್ಲವೇ ?" ಎಂದು ಕೇಳಿದರು. ನನಗೆ ಆಗ ಥಟ್ಟನೆ ಹೊಳೆದದ್ದು ನಮ್ಮೂರಿನ       " ನಾಮಚಿಲುಮೆ-ದೇವರಾಯನದುರ್ಗ" ದ ಕಾಯ್ದಿಟ್ಟ ಅರಣ್ಯ ! ಅಲ್ಲಿಗೆ ಹೋಗುವುದೆಂದು ನಿರ್ಧರಿಸಿದೆವು !