Wednesday, 9 November 2016

ನಮ್ಮ ನಡೆ " ದೇವರಾಯನ ದುರ್ಗದ ಕಡೆ " !


ಹೀಗೆ ನಾವು ಟಾಮ್ ಅವರನ್ನ ಕುರುಚಲುಕಾಡಿಗೆ ಕರೆದುಕೊಂಡು ಹೋಗುವುದೆಂದಾದಮೇಲೆ ಒಂದು ಗಾಡಿ ಮಾಡುವುದು ಎಂದಾಯಿತು ( ಕಾರು). ಭಾನುವಾರದ ಬೆಳ್ಳಂಬೆಳಿಗ್ಗೆ ಡ್ರೈವರ್ ನಮ್ಮನ್ನ ಪಿಕಪ್ ಮಾಡಿದಮೇಲೆ ನೇರ ಟಾಮ್ ಅವರ ಹೋಟೆಲ್ ವೈಟ್ ಫೀಲ್ಡ್ ನ "ಪಾಮ್ ಮೆಡೋಸ್ " ಗೆ ಹೋದೆವು. ಈ ಪಾಮ್ ಮೆಡೋಸ್ ಯುರೋಪಿಯನ್ ಶೈಲಿಯ ಸಾಲು ಸಾಲು ವಿಲ್ಲಾಗಳಿರುವ ಗೇಟೆಡ್ ಕಮ್ಯೂನಿಟಿ , ವೈಟ್ ಫೀಲ್ಡ್ ನ ಉಸಿರುಗಟ್ಟಿಸುವ ಬೀದಿಗಳಲ್ಲಿ ಹಣವುಳ್ಳವರ ಐಷಾರಾಮಿ ಜಗತ್ತು ! ಒಳ ಹೋದರೆ  ಯೂರೋಪ್ ನಲ್ಲೆ ಇರುವಹಾಗೆ ಅನ್ನಿಸುತ್ತದೆ ಹೊರಬಂದರೆ "ಬೀಡಿ ಬೆಂಕಿ ಪೊಟ್ಟಣ ದುಕಾನ್  ! "

ಪಾಮ್ ಮೇಡೋಸ್ ನ ಪಕ್ಕದಲ್ಲೇ "ಜಾಗೃತಿ" ಥೀಯೇಟರ್ ಇದೆ ! ಬೆಂಗಳೂರಿನಲ್ಲಿ ಹವ್ಯಾಸಿ ರಂಗ ಭೂಮಿಯ ಒಂದು ಛಾಪು ಇದು ! ಒಳಗಡೆಯ ಸೆಕ್ಯೂರಿಟಿಯನ್ನೆಲ್ಲ ದಾಟಿ "ಟಾಮ್ " ರನ್ನ ಕಾರಿನಲ್ಲಿ ಕರೆದುಕೊಂಡಮೇಲೆ ರಿಂಗ್ ರೋಡ್ನಮೂಲಕ ತುಮಕೂರಿನ ಕಡೆಗೆ ಹೊರಟೆವು. ದಾರಿಯುದ್ದಕೂ ಟಾಮ್ " how much time will it take to get out of the city ? !" ಅಂತಲೇ ಕೇಳುತ್ತಿದ್ದರು ! ನಾನು " considerable amount of time !" ಅಂತಷ್ಠೆ ಹೇಳಿ ನಗುತ್ತಿದ್ದೆ !

ಕಾರು ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಾವರಿಸಿಕೊಂಡು ಸುಮಾರು ಒಂದೂವರೆ ಗಂಟೆಗಳಾದಂತರ ಗೊರಗುಂಟೆ ಪಾಳ್ಯಕ್ಕೆ ಬಂದು ಮೇಲ್ಸೇತುವೆ ಏರಿದನಂತರ " Oh we hit the highway !" ಅಂದರು ಟಾಮ್ !  ಇವರು ಅಮೆರಿಕಾವನ್ನು ಬಹಳಷ್ಟು ಟೀಕಿಸುತ್ತಾರೆ ! ಅದರ ದ್ವಂದ್ವ ನೀತಿಗಳನ್ನು ಯಾವುದೇ ಭಿಡೆಯಿಲ್ಲದೆ ಚರ್ಚಿಸುತ್ತಾರೆ !
ನಾನು ಸುಮ್ಮನೆ ಹಾಗೆ " ನೀವು ಮೂಲ ಅಮೆರಿಕನ್ನರಾ ?" ಎಂದು ಕೇಳಿದೆ !
ಅದಕ್ಕವರು " ಇಲ್ಲ ನಾವು ಜರ್ಮನಿಯ ಜ್ಯೂಇಶ್ ಮೂಲದವರು , ೨೦೦ ವರ್ಷಗಳ ಹಿಂದೆ ಅಮೇರಿಕಾಗೆ ವಲಸೆ ಬಂದೆವು" ಅಂದರು !
ನನಗೆ ನನ್ನ ಗೆಳೆಯ ಹೇಳುತ್ತಿದ್ದ ಮಾತು ನೆನೆಪಾಯಿತು  " ಜ್ಯೂಗಳ IQ ಮತ್ತು ಮೂಗು ಎಲ್ಲರಿಗಿಂತ ಹೆಚ್ಚು, ಅಲ್ಲದೆ ಅವರು ಅಮೆರಿಕಾದ ನೀತಿಗಳ ಪ್ರಭಲ ವಿಮರ್ಶಕರು  !"

ಟಾಮ್ ರ ಮೂಗು ಉದ್ದವಾಗಿತ್ತು , IQ ಬಗ್ಗೆ ಹಿಂದಿನ ಬರಹದಲ್ಲೇ ವಿವರಿಸಿದ್ದೇನೆ, ಅಮೆರಿಕಾದ ದ್ವಂದ್ವ ನೀತಿಗಳ ಬಗ್ಗೆ ಮೇಲೆ ಹೇಳಿಯಾಗಿದೆ ! ಹಾಗೆ ಹೀಗೆ ಮಾತು ಹೊರಳಾಡುತ್ತಿದಾಗ ಕಾರು ದಾಬಸ್ಪೇಟೆಯ ಹತ್ತಿರಕ್ಕೆ ಬಂತು. ನಾನು ಡ್ರೈವರ್ ಗೆ ಫ್ಲೈಓವರ್ ನ ಕೆಳಗೆಹೋಗಿ ಬಲಗಡೆ ತಿರುಗುವುದು ಎಂದಿದ್ದಕ್ಕೆ ಆವಾS " ಇಂಟರ್ನ್ಯಾಷನಲ್ ಏರ್ಪೋರ್ಟ್ ರೂಟು ಅಲ್ವಾ ಸಾರ್ ? ಗೊತ್ತು ಬಿಡಿ " ಅಂದ !

ನಾನು " ಏರ್ಪೋರ್ಟ್ ಅಲ್ಲಪ್ಪ ! ಇನ್ನೊಂದು ದಾರಿಯಿಂದ ಹೋಗಬೇಕು 'ದೇವರಾಯನ ದುರ್ಗದ ಕಡೆಗೆ ' " ಅಂದೆ !
"ಆಯ್ತು ಬಿಡಿ " ಅಂದದ್ದು ಕೇಳಿಸಿತು !

ಹೀಗೆ ಸಾಗುವಾಗ ದೂರದಿಂದ ಕುರುಚಲುಕಾಡಿನ ಮರಗಿಡಗಳು, ಎಡಬಲದಲ್ಲಿ ಹಸಿರು ಹೊಲಗಳು , ಅಲ್ಲಲ್ಲಿ ನೀಲಗಿರಿ , ಮಾವು, ಹಲಸು ಕಾಣತೊಡಗಿತು. ಟಾಮ್ ರ ಎದೆಬಡಿತ ಹೆಚ್ಚಾದಂತೆ ಅನಿಸಿತು ! ಆಗಾಗ ಕಾರುನಿಲ್ಲಿಸಿ ಹತ್ತಿರದಿಂದ ಮರಗಳನ್ನು ನೋಡುತ್ತಿದ್ದರು. ನಾನು " ಬನ್ನಿ ಇವೇ  ಮರಗಳು ಮುಂದೂ ಕಾಣಸಿಗುತ್ತವೆ "ಅಂದೆ , ಸುಮ್ಮನಾದರು !

ಅವರ ಒಂದು ಪ್ರಶ್ನೆ ಹೀಗಿತ್ತು " ಈ ಮರಗಳೇಕೆ ಎತ್ತರಕ್ಕಿಲ್ಲ ? ಕುಬ್ಜವಾಗಿವೆ !"

ನಾನು " ಕಾಡಿನಲ್ಲಿ ಎತ್ತರದ್ದ ಮರಗಳಿವೆ " ಎಂದೆ

"let us see " ಅಂದರು !

ಮದ್ಯಾಹ್ನದ ಹೊತ್ತಿಗೆ ದೇವರಾಯನ ದುರ್ಗ ತಲುಪಿದೆವು, ದೇವರಗುಡಿಗೆ ಹೋಗಿ ನರಸಿಂಹನಿಗೆ ಮುಖತೋರಿಸಿ , ಟಾಮ್ ಅವರ ಹಣೆಗೆ ಕುಂಕುಮ ಏರಿಸಿ "ಗರುಡಗಂಭದ ಕಡೆಗೆ " ಹೊರಟೆವು ! ದೇವೆರಾಯನ ದುರ್ಗದ ಬೆಟ್ಟದ ತುತ್ತತುದಿಯಲ್ಲಿ ಗರುಡಗಂಭವಿದೆ ಅಲ್ಲಿಗೆ ಸುಮಾರು ಜನ "ಚಾರಣಕ್ಕೆ" ಹೋಗುವುದುಂಟು ಮತ್ತು ಅಲ್ಲಿಂದ ಇಡೀ " ನಾಮಚಿಲುಮೆ-ದೇವರಾಯಣದುರ್ಗದ " ಕಾಡು ಕಾಣಸಿಕ್ಕುತ್ತದೆ , ಸುರುಳಿ ಸುರುಳಿ ಯಾಗಿರುವ ರಸ್ತೆಗಳು ಕಾಡಿಗೆಸುತ್ತಿದ ಸರ್ಪಗಳಂತನಿಸುತ್ತವೆ ! ನಾವೆಲ್ಲರೂ ಸುಲಭವಾಗಿ ಹತ್ತಿದೆವು,  ಇನ್ನೇನು ' ಕಂಭ ' ಕಾಣಸಿಗುತ್ತಿದೆ ಎನ್ನುವಷ್ಟರಲ್ಲಿ ದೊಡ್ಡದೊಂದು ಬಂಡೆ ಎದುರಾಯಿತು.

ಇದು ಮೇಲ್ಮುಖವಾಗಿದ್ದುದ್ದರಿಂದ ಹತ್ತುವುದು ಕೊಂಚ ಕಷ್ಟ ಅನ್ನಿಸಿತು, ನಾವು ಹೇಗೋ ತೆವಳಿ ಹತ್ತಿ ಮೇಲೆ ಬಂದೆವು              ' ಟಾಮ್ ' ನಿಧಾನವಾಗಿ ಕವಚಿಕೊಂಡು ಹತ್ತುತ್ತಿದ್ದರು. ಅವರಿಗೆ ೫೮ ಆಗಿತ್ತು , ಸಹಾಯಹಸ್ತ ಚಾಚಿದ್ದಕ್ಕೆ "ಬೈದರು" !
ಒಳ್ಳೆ ಸಹವಾಸ ವೆಂದು ನಾವೂ ಸುಮ್ಮನಾದೆವು !
ಮೇಲೆ ಹತ್ತಿಬಂದವರು ಸುಮ್ಮನೆ ಸುತ್ತಲೂ ಒಮ್ಮೆ ನೋಡಿದರು  ತಣ್ಣನೆ ಗಾಳಿ, ಕಣ್ಣು ಚುಚ್ಚುವ ಹಸಿರು ಕಾಡು, ಕಾಲ ಕೆಳಗಿನ ದೈತ್ಯ ಬಂಡೆ, ಆಗಾಗ ಹತ್ತಿರ ಬರಲು ಯತ್ನಿಸುವ ಮಂಗಣ್ಣಗಳು, ಮೇಲೆ ಬಂದ ಖುಷಿ ಮತ್ತು ತೃಪ್ತಿ ಅವರ ಕಣ್ಣಿನಲ್ಲಿತ್ತು!

" Its amazing !" ಅಂದರು.
ನಾನು " you will see more" ಎಂದೆ.
" sure i will  " ಅಂದರು.

ನಾವು ಅಲ್ಲಿಂದ ಹೊರಟು ನಾಮಚಿಲುಮೆ ತಲುಪಿದೆವು ದಾರಿಯಲ್ಲಿ ಅಲ್ಲಲ್ಲಿ ಐದಾರು ಬಾರಿ ಕಾರು ನಿಲ್ಲಿಸಿ ಟಾಮ್ ದೈತ್ಯ ಮರಗಳನ್ನು ಅಡಿಯಿಂದ ಮುಡಿಯವರೆಗೆ ನೋಡುತ್ತಿದ್ದರು. ರಸ್ತೆಯ ಬಳಿಯೇ ಇದ್ದ ಮರಗಳನ್ನು ಮುಟ್ಟಿ ಏನನ್ನೋ ಅನುಭವಿಸುತ್ತಿದ್ದರು, ನನಗದು ನಿಲುಕಲಿಲ್ಲ ! ಅವರು ಕೇಳಿದ ಮರಗಳ ಹೆಸರುಗಳು ನನಗೆ ಗೊತ್ತಿರಲಿಲ್ಲ ಅತ್ತಿ , ಆಲ,ಹೊನ್ನೆ , ಬೀಟೆ , ನೀಲಗಿರಿ , ಹಲಸು, ಮಾವು, ಗಂಧ , ತೇಗ ಇಷ್ಟೇ ಗೊತ್ತಿರುವ ನಾನು ಕಾಡಮರಗಳನ್ನು ಹೇಗೆ ತಾನೇ ಬಲ್ಲೆ !

ಆದರೂ ನಾನು ಅವರಿಗೆ " ಸಾಲು ಮರದ ತಿಮ್ಮಕ್ಕ " ನವರ ಬಗ್ಗೆ ಹೇಳಿದೆ , ಮಕ್ಕಳಿಲ್ಲದೆ ಮರಗಳನ್ನು ಬೆಳೆಸಿ-ನೀರುಣಿಸಿ-ಪೋಷಿಸಿ-ಹಿರಿದಾಗಿಸಿ ಸಾರ್ಥಕ್ಯ ಕಂಡುಕೊಂಡ ಕಥೆ ಯಾರ ಮನ ಕಲುಕುವುದಿಲ್ಲ ಹೇಳಿ ? ಟಾಮ್ ಕೊಂಚ  ಭಾವುಕರಾದರು ಅನ್ನಿಸಿತು ! 

ನಾಮಚಿಲುಮೆಯ ಉದ್ಯಾನದ ಒಳಹೊಕ್ಕ ನಾವು ಮೊದಲಿಗೆ ಜಿಂಕೆಯವನಕ್ಕೆ ಹೋದೆವು . ಮದ್ಯಾಹ್ನದ ಸಮಯವಾಗಿದ್ದರಿಂದ ಹತ್ತಾರು ಜಿಂಕೆಗಳು ಹತ್ತಿರದಲ್ಲಿಯೇ ಇದ್ದವು ! ದಾರಿಹೋಕರ ಕೈಲಿದ್ದ ಸೌತೆ , ಬಾಳೆಹಣ್ಣುಗಳ ಮೇಲೆ ಅವುಗಳ ಕಣ್ಣು !  ಮಂಗಣ್ಣಗಳನ್ನು ಬಿಟ್ಟರೆ ಇಲ್ಲಿರುವ ಏಕೈಕ ಪ್ರಾಣಿಸಂಕುಲವೆಂದರೆ ಅದು ಜಿಂಕೆಗಳದ್ದು, ಇಲ್ಲಿ ದಶಕಗಳಿಂದ ನೂರಾರು ಜಿಂಕೆಗಳು ಹಾಯಾಗಿವೆ ಮತ್ತು ಹಲವಾರು ಸಂಘ ಸಂಸ್ಥೆಗಳು ಇವುಗಳನ್ನು ದತ್ತು ಪಡೆದು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ !
ಇಲ್ಲಿನ ಇನ್ನೊಂದು ಆಕರ್ಷಣೆಯೆಂದರೆ ನಾಮಚಿಲುಮೆ ! ವನವಾಸದಲ್ಲಿದ್ದ ರಾಮ ಸೀತೆ ಮತ್ತು ಲಕ್ಷ್ಮಣರು ಇಲ್ಲಿಗೆ ಬಂದಾಗ ಸೀತೆಗೆ ತಿಲಕವಿಡುವ ಸಂಧರ್ಭ ಬರುತ್ತದೆ, ಹತ್ತಿರದಲ್ಲೆಲೂ ನೀರಿರದಕಾರಣ ರಾಮನು ಬಾಣಹೂಡಿ ಬಂಡೆಯನ್ನು ಸೀಳುತ್ತಾನೆ, ಆಗ ಚಿಮ್ಮಿದ ನೀರಿನಿಂದ  ಸೀತೆಗೆ ತಿಲಕವನ್ನಿಟ್ಟ  ಆದ ಕಾರಣ ಹೆಸರು ನಾಮಚಿಲುಮೆ ಎಂದಾಗಿದೆ !
ಇಲ್ಲಿ ಬಂಡೆಯ ಮೇಲೆ ಒಳಕಲ್ಲಿನ ಮಾದರಿಯಲ್ಲಿ ಪುಟ್ಟ ರಂದ್ರವಿದೆ ಮತ್ತು ಅದರಿಂದ ನಿರಂತರ ನೀರು ಜಿನುಗುತ್ತದೆ ! ಇದರ ಬಗ್ಗೆಯೂ ' ಟಾಮ್ ' ರವರಿಗೆ ವಿವರಿಸಿದಾಗ ಮಾತು ನಂಬಿಕೆ, ಧರ್ಮ, ದೇವರು, ಪ್ರಕೃತಿಯ ಕಡೆ ಹೊರಳಿತು !

ನಾನು ನನಗನ್ನಿಸಿದ್ದನ್ನು ಹೇಳಿದೆ ' ಟಾಮ್ ' ತಾವು ' ಚರ್ಚಿಗೆ ' ಹೋಗದ ಕ್ರಿಶ್ಚಿಯನ್ ಎಂದೂ ತಮ್ಮ ನಂಬಿಕೆಗಳೆಲ್ಲವೂ ತುಂಬಾ ' ಪರ್ಸನಲ್ ' ಅದುವೆಂದೂ ಹೇಳುತಿದ್ದಾಗ  ನಾನು ಗೌರವದಿಂದ ಕೇಳುತ್ತಿದ್ದೆ !

ಬೆಂಗಳೂರಿಂದ ದೂರ, ಕಾಡುಮಧ್ಯೆ, ಜಿಂಕೆಗಳ ನಡುವೆ, ರಾಮನ ಚಿಲುಮೆಯ ಪಕ್ಕದಲ್ಲಿ, ಮರದ ಕೆಳಗೆ ಕೂತು ಜ್ಯೂಯಿಶ್ ಮೂಲದ ಅಮೆರಿಕನ್ ಒಬ್ಬರ ಜೊತೆ ಮಾಡಿದ ತೆರೆದ ಹೃದಯದ ಧಾರ್ಮಿಕ ಚರ್ಚೆ ಮರೆಯಲಾಗದಂತಹುದು !
ಸಮಯ ನಾಲಕ್ಕಾಗುತ್ತಿತ್ತು ಟಾಮ್   "what next ? " ಎಂದು ಕೇಳಿದರು !

ನಾನು " ಸಿದ್ಧಗಂಗೆ ! " ಎಂದೆ !