Friday, 16 December 2016

ಗುಬ್ಬಿ ಮತ್ತೊಮ್ಮೆ ಗಿಜಗುಡುತ್ತಿದೆ ಕೇಳಿದಿರಾ ???



Image result for cute sparrows wallpaper
ನೀವು ನೂರಕ್ಕೆ ನೂರು ಈ ಮಾತುಕತೆಯನ್ನು ಕೇಳಿರುತ್ತೀರ, ಅಥವಾ ನೀವೇ ಇದರಲ್ಲಿ ಭಾಗಿಯಾಗಿರುತ್ತೀರ ! ಆ ಮಾತುಕತೆ ಗುಬ್ಬಿಗಳ ಬಗ್ಗೆ ! ಗುಬ್ಬಿ ನಮ್ಮೆಲ್ಲರ ಬಾಲ್ಯದ ಗೆಳೆಯ , ನಾವು ಗುಬ್ಬಿ ಗೂಡುಕಟ್ಟುವುದನ್ನು ಅಲ್ಲಿಲ್ಲಿ ಬಿದ್ದ ಕಾಳುಕಡ್ಡಿ ತಿನ್ನುವುದನ್ನು ನೋಡಿರುತ್ತೇವೆ. ದಸರೆಯ ರಜೆಯಲ್ಲೋ ಬೇಸಿಗೆಯ ಬಿಸಿಲಲ್ಲೋ ಅಮ್ಮ ಅಕ್ಕಿ ನುಚ್ಚು ಒಣಗಿಸಿದರೆ , ಗೋಧಿ ಹರಡಿದರೆ ನಮ್ಮನ್ನು ಕಾಯಲು ಬಿಟ್ಟುಹೋಗುವುದು ವಾಡಿಕೆ ! ಕಾಗೆ ಓಡಿಸುವ ನಾವು, ದನ ಕರು ತಿನ್ನಲು ಬಂದರೆ ಬಿಡದವರು ಒಂದುವೇಳೆ ಗುಬ್ಬಿಗಳು ಬಂದು ತಿಂದರೆ ಸುಮ್ಮನಿರುತ್ತಿದ್ದೆವಲ್ಲ ಯಾಕೆ ? ಅವುಗಳ ಗಾತ್ರನೋಡಿ ಇವು ಇನ್ನೆಷ್ಟು ತಿಂದಾವು ಎಂಬ ಸಹಾನುಭೂತಿಯಾ ? ಅವುಗಳ ಮೇಲಿನ ಪ್ರೀತಿಯಾ ?  


" ಈಗಂತೂ ಗುಬ್ಬಿಗಳೇ ಇಲ್ಲ ! ಈ ಮೊಬೈಲು ನೆಟ್ವರ್ಕ್ ರೇಡಿಯೇಶನ್ ನಿಂದ ಎಲ್ಲ ಸತ್ತು ಹೋಗುತ್ತಿವೆ ಸೂಕ್ಷ್ಮ ಜೀವಿಗಳು ನೋಡಿ, ಎಲ್ಲಿ ತಡೆದಾವು ?! ನಮಗೇ ತಲೆನೋವು ಬರುತ್ತದೆ ಇನ್ನು ಪಾಪ ಅವು ಏನುಮಾಡಿಯಾವು !" ಎಂಬುದು ನಮ್ಮೆಲರ ಸರ್ವೇಸಾಮಾನ್ಯ ನಿಲುವು. " ಗಿಜಿಗಿಜಿ ಗುಟ್ಟುವ ಶಹರಗಳಲ್ಲಿ ಗುಬ್ಬಿಗಳಿಗೆಲ್ಲಿದೆ ಜಾಗ ? ಜನಗಳೇ ಗುಬ್ಬಿಗಳಂತೆ ಒಬ್ಬರಮೇಲೊಬ್ಬರು ಒತ್ತರಿಸಿ ಜೀವಿಸುತ್ತಿರುವಾಗ " ! ಆದರೆ ಒಮ್ಮೆ ನಿಮ್ಮ ಶಹರದಿಂದ ಒಂದಷ್ಟು ಕಿಲೋಮೀಟರು ದೂರ ಸಾಗಿ, ಅಗಲವಾಗಿ ಕಣ್ಣು ಬಿಡಿ ! ಅಲ್ಲಲ್ಲಿ ಮರದಪೊಟರೆಯಲ್ಲೋ, ಮನೆಯ ಜಂತೆಯಲ್ಲೋ, ಬೇಲಿಯಲ್ಲೋ ಗುಬ್ಬಿಗಳು ಈಗಲೂ  ಗಿಜುಗುಟ್ಟುತ್ತಿರುತ್ತವೆ ! ನೋಡುವ ಧಾವಂತ ಮತ್ತು ವ್ಯವಧಾನ ಬೇಕಷ್ಟೆ !

ಗುಬ್ಬಿಗಳು ವಿಕಿರಣಗಳಿಗಿಂತಾ ಪರಿಪಾಟಲು ಪಡುತ್ತಿರುವುದು ತಂಪನೆರೆವ ಮರಗಳಿಲ್ಲದೆ , ಕುಡಿಯಲು ನೀರಿನ ಹೊಂಡಗಳಿಲ್ಲದೆ , ತಿನ್ನಲು ಕಾಳುಕಡ್ಡಿ ಗಳು ಸಿಗದೆ ! ಅಭಿವೃದ್ದಿಗಾಗಿ ಮರಗಳ ಕಡಿದು , ಕೆರೆ ಹೊಂಡಗಳನು ಆವರಿಸಿಕೊಂಡು ಕಟ್ಟಡಗಳ ಕಟ್ಟುತ್ತಿರುವುದರಿಂದ ! ಬಿಸಿಲು ಹೆಚ್ಚಾಗಿ ಕುಡಿವ ನೀರಿಲ್ಲದೆ ಹಾರುವ ಗುಬ್ಬಿಯ ಎದೆ ನಿಮಿಷಕ್ಕೆ  ನಾನೂರ ಐವತ್ತು ಬಾರಿ ಹೊಡೆದುಕೊಳ್ಳುವಾಗ ಗಾಳಿಯಲ್ಲಿನ ಇಂಗಾಲದ ಆಕ್ಸೈಡ್ ಮತ್ತು ಡೈಆಕ್ಸೈಡ್ ಅದರ ಎದೆಹೊಕ್ಕರೆ ಏನಾಗಬೇಡ ???
ಮೊದಲೇ ಸೂಕ್ಷ್ಮ ಜೀವಿ ಪಾಪ  !

ಚಿಕ್ಕಂದಿನಲ್ಲಿ ಗುಬ್ಬಿ ಕೈಗೆಸಿಗುವಷ್ಟು ಹತ್ತಿರವಿದ್ದರೂ ನಾವು ಅದನ್ನು ಮುಟ್ಟುತ್ತಿರಲಿಲ್ಲ,  ಕಾರಣ " ಗುಬ್ಬಿ ಭ್ರಾಹ್ಮಣ ನಂತೆ ! ಅದನ್ನು ಮನುಷ್ಯರು  ಮುಟ್ಟಿದರೆ ಅದರ ಸಂಕುಲಕ್ಕೆ ಹೇಗೋ ಅದು ಗೊತ್ತಾಗಿ ಅದನ್ನು ಸಾಯಿಸಿಬಿಡುತ್ತದೆಂಬ ಸ್ಥಾಪಿತ ( ಒಳ್ಳೆಯದೇ ) ಭಯದಿಂದ " ! ಇದು ನಮ್ಮ ಹಿರಿಯರು ಅವರ ಹಿರಿಯರು ಗುಬ್ಬಿ ಎಂಬ ಸೂಕ್ಷ್ಮ ಜೀವಿಯನ್ನು ರಕ್ಷಿಸಲು ಅನುಸರಿಸುತ್ತಿದ್ದ ಮಾರ್ಗೋಪಾಯ ! ಈ ಹಿರಿಯರೇ ಮರಗಿಡ ನೆಟ್ಟವರು, ಕೆರೆ ಕಟ್ಟೆ ಮಾಡಿದವರು , ಬೇಸಿಗೆಯಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ತಣ್ಣೇರು ಹೊಂಡ ಕೊರೆದು ನೀರು ತುಂಬಿಸಿದವರು, ಅಲ್ಲಲ್ಲಿ ಸುಖಾ ಸುಮ್ಮನೆ ಕಾಳು ಕಡ್ಡಿ ಚಲ್ಲಿದವರು ! 

ನಾವೋ ಸ್ಟೀಲ್ ಫ್ಲೈಓವರ್ ಗಳಿಗಾಗಿ , ರಸ್ತೆ ಅಗಲೀಕರಣ ಕ್ಕಾಗಿ, ಪಾರ್ಕಿಂಗ್ ಗಾಗಿ ಕೆಲವೊಮ್ಮೆ ಏನೂ ಕಾರಣವಿರದೆ   ಸಾವಿರ ಸಾವಿರ ಮರಗಳ ಮುಲಾಜಿಲ್ಲದೆ  ಕಡಿವವರು ! ಅವುಗಳ  ಸಂಖ್ಯೆ ಕ್ಷೀಣಿಸಹೊರಟಿರುವಾಗ ಅದನ್ನು ವಿಕಿರಣದ ಮೇಲೆ ದೂಡಿ ಸುಮ್ಮನಾಗುತ್ತೇವೆ ! UV ಮತ್ತು IR ವಿಕಿರಣಗಳ್ಳನ್ನು ಸಾವಿರಾರು ವರ್ಷಗಳಿಂದ ಸಹಿಸಿರುವ ಗುಬ್ಬಿಗೆ ಬೇಕಿರುವುದು ಒಂದು ಮರ , ಒಂದಷ್ಟು ಕಾಳು ಕಡ್ಡಿ ಮತ್ತು ಕುಡಿಯಲು ಗುಟುಕು ನೀರು !

ವಿಶೇಷ ಸೂಚನೆ : ನೇತ್ರಾವತಿ ತಿರುವು ಯೋಜನೆಯಡಿಯಲ್ಲಿ ಸರ್ಕಾರ ಸಾವಿರಾರು ಮರಗಳನ್ನು ಕೆಳಗುರುಳಿಸಲು ಸಿದ್ದವಾಗಿರುವ ಬೆನ್ನಲ್ಲೇ  ಬೈರಾಪುರ -ಶಿಶಿಲ ರಸ್ತೆಯ ಕೆಲಸ ಶುರುವಾಗಿದೆಯಂತೆ ಇದರಿಂದ ಮೂಡಿಗೆರೆ ಮತ್ತು ಉಜಿರೆಯ ಹಾದಿ ಇಪ್ಪತೊಂಬತ್ತು (೨೯) ಕಿಲೋಮೀಟರು ಕಡಿಮೆಯಾಗಿತ್ತದೆಯಂತೆ !   ಇದು ಪೂರ್ಣವಾಗುವುದರ ಒಳಗೆ ಐವತ್ತು ಸಾವಿರ (೫೦೦೦೦) ಮರಗಳು ಧರೆಗುರುಳುತ್ತವೆ ! ಇಲ್ಲಿ ಸಾಲುಮರದ ತಿಮ್ಮಕ್ಕ ನವರು ಬಿಬಿಸಿ ಯ ವಿಶ್ವದ ೧೦೦ ದಿಟ್ಟ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ ! ನಮ್ಮ ಘನ ಸರ್ಕಾರ ಎರಡನ್ನೂ ಸಮರ್ಥಿಸಿಕೊಂಡು ಹಿಗ್ಗುತ್ತದೆ !


ಒಕ್ಕಲೆಬ್ಬಿಸಿದ ಮನುಷ್ಯನಿಗೆ ಕೆಲವೊಮ್ಮೆ ಸರ್ಕಾರ ಜಮೀನನ್ನೋ, ಮನೆಯನ್ನೋ ಅಥವಾ ಕಾಸನ್ನೋ ಕೊಡುತ್ತದೆ ! ಕೆಳಗೆಬಿದ್ದ ಈ ಮರಗಳಲ್ಲಿ ಆಶ್ರಯ ಪಡೆಯುತ್ತಿದ್ದ ಗುಬ್ಬಿಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತವೆ ? ಊರಿಂದ ಓದಿಸಿದಿವಿ ಕಾಡಿಗೆ ಬಂದವು ಈಗ ಕಾಡಿನಿಂದ ???



References 

http://timesofindia.indiatimes.com/articleshow/55596266.cms

http://timesofindia.indiatimes.com/city/bengaluru/Saalumarada-Thimmakka-in-BBCs-100-Women-list/articleshow/55573030.cms

http://m.dailyhunt.in/news/india/english/news+karnataka-epaper-newskarn/western+ghats+to+lose+30+000+trees+to+make+way+for+byrapura+shishila+road+project-newsid-60717063